ದೆಹಲಿ ಮದ್ಯ ಹಗರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಂದು ಬೆಳ್ಳಂಬೆಳಗ್ಗೆ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ತಪಾಸಣೆ ನಡೆಸಿತು. 10 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಇಡಿ ಬಂಧಿಸಿದೆ. ಮತ್ತೊಂದೆಡೆ. ಸಂಜಯ್ ಸಿಂಗ್ ಬಂಧನ ಖಂಡಿಸಿ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಹಗರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಬಂಧನದ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ‘ಸಂಜಯ್ ಸಿಂಗ್ ಬಂಧನವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ’ ಎಂದು ಟ್ವಿಟ್ (X) ಮಾಡಿರುವ ಕೇಜಿವಾಲ್, ‘ಇದು ಮೋದಿಯವರ ಆತಂಕವನ್ನು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ. ‘ಚುನಾವಣೆವರೆಗೂ ಇನ್ನೂ ಹಲವು ಪ್ರತಿಪಕ್ಷ ನಾಯಕರನ್ನು ಬಂಧಿಸುತ್ತಾರೆ’ ಎಂದು ಅವರು ಆರೋಪಿಸಿದ್ದಾರೆ.