ಅ.26 ಐಐಎಂ ಬೆಂಗಳೂರು ಮ್ಯಾನೇಜರ್‌ಗಳನ್ನಷ್ಟೇ ಹುಟ್ಟುಹಾಕಿದ್ದಲ್ಲ, ನಾಯಕರನ್ನು ಚಿಂತಕರನ್ನು ಕೂಡ ಬೆಳೆಸಿ ಸಮಾಜಕ್ಕೆ ಕೊಟ್ಟಿದೆ. ಇಂತಹ ಸಂಸ್ಥೆ ಈಗ ಸುವರ್ಣ ಸಂಭ್ರಮದಲ್ಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸುವರ್ಣ ಮಹೋತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿಷ್ಠಾನ ಸಪ್ತಾಹವನ್ನು ಉದ್ಘಾಟಿಸುವ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಅ.26) ಬೆಂಗಳೂರಿಗೆ ಆಗಮಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂಸ್ಥೆಯು ವೃತ್ತಿಪರರಲ್ಲಿ ಕೌಶಲ್ಯ ಮತ್ತು ಅಂತರಂಗದ ಬೆಳವಣಿಗೆಗೂ ಮಾರ್ಗದರ್ಶನ ನೀಡುತ್ತಿದೆ. ಐಐಎಂ ಬೆಂಗಳೂರು ಸ್ಥಾಪನೆಯಾದ ಅಂದಿನಿಂದಲೂ ವೃತ್ತಿಪರತೆ, ನವೋನ್ವೇಷಣೆ ಸೇರಿ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನಕೊಡುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುವರ್ಣ ಮಹೋತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಲಿದ್ದಾರೆ. ಇದೇ ವೇಳೆ ಐಐಎಂ ಬಿ ಕ್ಯಾಂಪಸ್ ಕುರಿತ ಪುಸ್ತಕ ಬಿಡುಗಡೆ ಮತ್ತು ಐಐಎಂಬಿ ಕುರಿತಾದ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ ಎಂದು ಐಐಎಂ ಬೆಂಗಳೂರು ತಿಳಿಸಿದೆ.