ಕಳೆದ ಶನಿವಾರ (ಅಕ್ಟೋಬರ್ 28) ಬಾಂಗ್ಲಾದೇಶ ತಂಡ ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತನ್ನ ಆರನೇ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಆಡಿ 87 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಬಾಂಗ್ಲಾ ಸೋಲಿನಿಂದ ಸಿಟ್ಟಿಗೆದ್ದ ಆ ತಂಡದ ಅಭಿಮಾನಿಗಳು ಸ್ಟೇಡಿಯಂನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಬಾಂಗ್ಲಾದೇಶದ ಅಭಿಮಾನಿಯೊಬ್ಬ ಕೋಪದ ಭರದಲ್ಲ ಕಾಲಿನಲ್ಲಿದ್ದ ಶೂವನ್ನು ತೆಗೆದುಕೊಂಡು ತನ್ನನ್ನು ತಾನೇ ಹೊಡೆದುಕೊಂಡಿದ್ದಾನೆ. ಅಭಿಮಾನಿಯ ಈ ಕೋಪಾತಾಪದ ದೃಶ್ಯವನ್ನು ಸ್ಟೇಡಿಯಂನಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೊಡ್ಡ ತಂಡಗಳ ವಿರುದ್ಧ ಸೋತಾಗ ನಮಗೆ ಬೇಸರವಾಗುವುದಿಲ್ಲ. ಆದರೆ ನೀವು ನೆದರ್ಲೆಂಡ್ಸ್ ವಿರುದ್ಧ ಹೇಗೆ ಸುತ್ತೀರಿ. ಶಾಕೀಬ್, ಮುಶ್ಫೀಕ್ ಸೇರಿ ತಂಡದ ಎಲ್ಲ ಆಟಗಾರರನ್ನು ತೆಗೆದುಹಾಕಬೇಕು. ಅವರ ಬದಲು ನಾನೇ ಆಡುತ್ತೇನೆ ಎಂದು ಅಭಿಮಾನಿ ಆರ್ಭಟಿಸಿದ್ದಾನೆ.
ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 50 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ನೆದರ್ಲೆಂಡ್ಸ್ ಈ ಗುರಿಯನ್ನು ಮುಟ್ಟಲು ವಿಫಲವಾಯಿತು. ಶಕೀಬ್ ಅಲ್ ಹಸನ್ ಪಡೆ 42.2 ಓವರ್‌ಗಳಲ್ಲಿ ಕೇವಲ 142 ರನ್‌ಗಳಿಗೆ ಸರ್ವಪತನ ಕಂಡಿತು. ನೆದರ್ಲೆಂಡ್ಸ್ ಈ ಬಾರಿಯ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು 87 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ಪಡೆಯಿತು. ಇದಕ್ಕೂ ಮುನ್ನ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 31 ರಂದು (ಮಂಗಳವಾರ) ಪಾಕಿಸ್ತಾನ ವಿರುದ್ಧ ಆಡಲಿದೆ. ಅದೇ ರೀತಿಯಾಗಿ ನೆದರ್ಲೆಂಡ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 3 ರಂದು (ಶುಕ್ರವಾರ) ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.