ನ ೦೨: ಮಗಳನ್ನು ತನ್ನೊಂದಿಗೆ ಕಳುಹಿಸಲಿಲ್ಲ ಎಂದು ಮಾವನನ್ನೇ ಕೊಂದು ತಾನೂ ಆತ್ಮಹತ್ಯೆ ಹಾದಿ ಹಿಡಿದು ದುರಂತ ಕಂಡ ಘಟನೆಯಿದು ಸಿಟ್ಟಿಗೆ ತಲೆ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿರುವ ಈ ದುರಂತ ಘಟನೆಗಳೇ ಸಾಕ್ಷಿ. ಇದು ನಡೆದಿರುವುದು ಕಲಬುರಗಿ ಜಿಲ್ಲೆ ಚಿಂಚೋಳಿ
ತವರು ಮನೆಯಿಂದ ಪತ್ನಿಯನ್ನು ಮನೆಗೆ ಕಳುಹಿಸದ ಮಾವನೊಂದಿಗೆ ಅಳಿಯ ತಕರಾರು ತೆಗೆದು ಕೊನೆಗೆ ಮಾವನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದು, ಈ ಘಟನೆಯಿಂದ ಮಾನಸಿಕವಾಗಿ ನೊಂದು ತಾನು ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ವಿದ್ರಾವಕ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬರ್ಸಿ ತಾಲೂಕಿನ ಭೋಯಿಂಚಿ ಗ್ರಾಮದ ಗೋರಖ್ ಗಾಯಕವಾಡ (29) ಎಂಬಾತನೆ ಮಾವ ಈರಪ್ಪ ಬೊಕೆ (65) ಅವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಾತ. ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದ ಈರಪ್ಪ ಬೊಕೆ ಅವರ ಮಗಳು ವೈಶಾಲಿಯನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬರ್ಸಿ ತಾಲೂಕಿನ ಗೋರಖ್ ಗಾಯಕವಾಡ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೇಲೆ 5 ತಿಂಗಳು ಗಂಡನ ಮನೆಯಲ್ಲಿದ್ದ ವೈಶಾಲಿ ಗಂಡ ಸರಿಯಾಗಿ ನೋಡಿಕೊಳ್ಳದ ಕಾರಣ 15 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು.
ಪತ್ನಿಯನ್ನು ಕರೆಯಲು ಮೂರು ದಿನಗಳ ಹಿಂದೆ ಮಾವನ ಮನೆಗೆ ಬಂದಿದ್ದ ಗೋರಖ್ ಗಾಯಕವಾಡ ತನ್ನ ಹೆಂಡತಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ತಕರಾರು ಮಾಡಿದ್ದ. ದೀಪಾವಳಿ ಹಬ್ಬ ಆದ ಮೇಲೆ ಕಳುಹಿಸಿಕೊಡುವುದಾಗಿ ಮಾವ ಹೇಳಿದರೂ ಕೇಳದೆ ಈಗಲೇ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದ.
ಅ.31 ರಂದು ಬೆಳಗ್ಗೆ ಮಾವ ಈರಪ್ಪ ಬೊಕೆ ಮತ್ತು ಅಳಿಯ ಗೋರಖ್ ಗ್ರಾಮದ ಬಸವರಾಜ ಹೊಸಮನಿ ಎಂಬುವವರ ಹೊಲಕ್ಕೆ ಹೋಗಿದ್ದಾರೆ. ಅಲ್ಲಿ ಮಾವ-ಅಳಿಯನ ನಡುವೆ ತಕರಾರು ನಡೆದು ಗೋರಖ್ ಸಿಟ್ಟಿನಲ್ಲಿ ಮಾವ ಈರಪ್ಪ ಬೋಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆವೇಶದಲ್ಲಿ ಮಾವನನ್ನು ಕೊಲೆ ಮಾಡಿದ ಅಳಿಯ ನೇರವಾಗಿ ತಮ್ಮ ಗ್ರಾಮವಾದ ಚಿಂತಪಳ್ಳಿಗೆ ಬಂದಿದ್ದು, ಮಾವನನ್ನು ಕೊಲೆ ಮಾಡಿದೆ ಎಂಬ ವಿಷಯ ಮಾನಸಿಕ ಮಾಡಿಕೊಂಡು ವಿದ್ಯುತ್ ಕಂಬ ಏರಿ ವಿದ್ಯುತ್ ತಂತಿ ಹಿಡಿದು ಶಾಕ್ ತಗುಲಿ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.