ನ ೨೫: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ವಿರುದ್ಧದ ಎನ್ಕೌಂಟರ್ ನಲ್ಲಿ ಹುತಾತ್ಮರಾಗಿದ್ದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಹೆಚ್ಎಎಲ್ ಏರ್‌ಪೋರ್ಟ್‌ಗೆ ತಲುಪಿದ್ದು, ನವೆಂಬರ್ 22ರಂದು ಜಮ್ಮು ಮತ್ತು ಕಾಶ್ಮೀರ (Jammu and Kashmir) ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡುವಾಗ ಎಂವಿ ಪ್ರಾಂಜಲ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು.
ವಿಮಾನ ನಿಲ್ದಾಣದಲ್ಲಿ ಪ್ರಾಂಜಲ್ ಅವರ ಪತ್ನಿ, ತಂದೆ-ತಾಯಿ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಬಳಿಕ ಸೇನಾಧಿಕಾರಿಗಳು ಪ್ರಾಂಜಲ್ ಪಾರ್ಥೀವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದರು. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಜಿಗಣಿಯಲ್ಲಿರುವ ಪ್ರಾಂಜಲ್ ಅವರ ನಿವಾಸಕ್ಕೆ ಏರ್ ಫೋರ್ಸ್ ಆ್ಯಂಬುಲೆನ್ಸ್ ನಲ್ಲಿ ಪ್ರಾಂಜಲ್ ಪಾರ್ಥೀವ ಶರೀರವನ್ನು ರವಾನಿಸಲಾಗುತ್ತಿದೆ.
ಗಣ್ಯರಿಂದ ಅಂತಿಮ ನಮನ
ಇನ್ನು ವಿಮಾನ ನಿಲ್ದಾಣಕ್ಕೆ ಪ್ರಾಂಜಲ್ ಪಾರ್ಥೀವ ಶರೀರ ತಲುಪುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆಜಾರ್ಜ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅವರು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ಉಗ್ರರ ವಿರುದ್ಧ ಕಾಳಗದಲ್ಲಿ ಎಂ.ವಿ.ಪ್ರಾಂಜಲ್ ಹುತಾತ್ಮರಾಗಿದ್ದಾರೆ. ದೇಶ ರಕ್ಷಣೆಗೆ ಹೋರಾಡಿ ಕ್ಯಾಪ್ಟನ್ ಪ್ರಾಂಜಲ್ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬದ ಒಬ್ಬನೇ ಮಗನನ್ನು ಪೋಷಕರು ಕಳೆದುಕೊಂಡಿದ್ದಾರೆ. ದುಃಖ ಭರಿಸುವ ಶಕ್ತಿ ದೇವರು ಅವರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ’ ಎಂದರು.
ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅಜರಾಮವಾಗಿರುತ್ತಾರೆ. ದೇಶಕ್ಕೆ ತುಂಬಲಾಗದ ನಷ್ಟವಾಗಿದೆ. ವೀರಯೋಧನ ತಂದೆ ತಾಯಿಗೆ ದುಖಃ ಭರಿಸುವ ಶಕ್ತಿ ನೀಡಲಿ ಅಂತ ಭಗವಂತನಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.