Mon. Dec 23rd, 2024

KRV:ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ, ಕಾನೂನು ಕೈಗೆತ್ತಿಕೊಂಡರೆ ಸಹಿಸಲು ಸಾಧ್ಯವಿಲ್ಲ-ಗೃಹ ಸಚಿವ ಪರಮೇಶ್ವರ

KRV:ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ, ಕಾನೂನು ಕೈಗೆತ್ತಿಕೊಂಡರೆ ಸಹಿಸಲು ಸಾಧ್ಯವಿಲ್ಲ-ಗೃಹ ಸಚಿವ ಪರಮೇಶ್ವರ

ಡಿ ೨೮:

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆಗಳ ಹಾವಳಿ ಹೆಚ್ಚಾಗಿದ್ದು, ಕನ್ನಡ ನಾಮಫಲಕಗಳ ಅಳವಡಿಕೆಗೆ ಒತ್ತಾಯಿಸಿ ನಿನ್ನೆ ಬುಧವಾರ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಬಂಧಿಸಿರುವ ಕ್ರಮವನ್ನು ವಿರೋಧಿಸಲಾಗಿದೆ.

ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ  ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ ಈಗ  14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ನಿನ್ನೆ ಪ್ರತಿಭಟನೆ ವೇಳೆ ಪೊಲೀಸರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ನಾರಾಯಣ ಗೌಡರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ನಮ್ಮ ಸರ್ಕಾರ ಕನ್ನಡ ಪರವಾಗಿ, ಕನ್ನಡ ರಕ್ಷಣೆ ಮಾಡುವ ವಿಚಾರದಲ್ಲಿ, ಕನ್ನಡ ಯೋಜನೆಗಳು, ಕಾರ್ಯಕ್ರಮಗಳು, ಭಾಷಾವಾರು ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಳ್ಳಲು ಸರ್ಕಾರ ಜನಪರವಾಗಿದೆ. ಬೆಂಗಳೂರು ನಗರ ಮತ್ತು ಇಲ್ಲಿನ ಜನತೆ ದೇಶಕ್ಕೆ, ಹೊರದೇಶಗಳ ನಾಗರಿಕರಿಗೆ ಮಾದರಿಯಾಗಬೇಕು. ಹೋರಾಟ ಗಲಾಟೆಗೆ ಕಾರಣವಾಗಬಾರದು, ನಮ್ಮ ಬಗ್ಗೆ ನಮಗೆ ಹೆಮ್ಮೆಯಿರಬೇಕು. ಜನತೆಗೆ ಉತ್ತಮ ಸಂದೇಶ ನೀಡಬೇಕು ಎಂದರು.

ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಇರಬೇಕೆಂದು ಕನ್ನಡಪರ ಮತ್ತು ಸಾಹಿತಿಗಳ ಒತ್ತಾಯವನ್ನು ನಾವು ಒಪ್ಪುತ್ತೇವೆ. ನಾವು ಅದನ್ನು ಪಾಲಿಸುತ್ತೇವೆ. ಫೆಬ್ರವರಿಯವರೆಗೆ ಸಮಯ ನಿಗದಿ ಮಾಡಿ ನಂತರವೂ ಇಂಗ್ಲಿಷಿನಲ್ಲಿ ನಾಮಫಲಕ ಕಂಡುಬಂದರೆ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿದ್ದೇವೆ ಎಂದರು.

ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಎಂದರೆ ಹೇಗೆ, ಒಂದಷ್ಟು ಸಮಯ ಪ್ರತಿಭಟನೆ ನಡೆಸಲು ಸಮಯ ಕೊಡುತ್ತಾರೆ, ಅದಾದ ಮೇಲೆ ಪ್ರತಿಭಟನಾಕಾರರು ಕೇಳದಿದ್ದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಅಂಗಡಿಗಳಿಗೆ ಹೋಗಿ ದಾಂಧಲೆ ಮಾಡಿ, ಬೋರ್ಡು ಕಿತ್ತು ಹಾಕುವ ಕ್ರಮ ಸರಿಯೇ, ಆಗ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಲ್ಲವೇ ಎಂದು ಕೇಳಿದರು.

ಮೂರು ತಿಂಗಳು ಸಮಯ ನೀಡುತ್ತೇವೆ, ಅಷ್ಟರೊಳಗೆ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕೆಂದು ನಮಗೆ ಒತ್ತಾಯ ಮಾಡಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅಧಿಕಾರವಿದೆ,ಅದು ಬಿಟ್ಟು ಶಾಪಿಂಗ್ ಸೆಂಟರ್ ಗಳಿಗೆ ನುಗ್ಗಿ ಕರ್ನಾಟಕ ರಕ್ಷಣಾ ವೇದಿಕೆಯವರು ದಾಳಿ ಮಾಡಿದರೆ ಪೊಲೀಸರು ಸುಮ್ಮನೆ ಕೂರುವುದಿಲ್ಲ. ಕಾನೂನು ಕೈಗೆತ್ತಿಕೊಂಡರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks