ಡಿ ೨೯:
ಮದುವೆಯ ಬಗ್ಗೆ ಅಸಮಾಧಾನಗೊಂಡ ಸಮುದಾಯದ ಮುಖಂಡರು, ತಮ್ಮ ಸಮುದಾಯದ ಜನರಿಗೆ ಆ ವ್ಯಕ್ತಿಯ ಕುಟುಂಬದೊಂದಿಗೆ ಮಾತನಾಡದಂತೆ ಕೇಳಿಕೊಂಡಿದ್ದು, ಒಂದು ವೇಳೆ ಮಾತನಾಡಿದರೆ 1,000 ರೂಪಾಯಿ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಆ ಬಗ್ಗೆ ಮಾಹಿತಿ ನೀಡುವವರಿಗೆ 500 ರೂಪಾಯಿ ಟಿಪ್ಸ್ ನೀಡಲು ಮುಂದಾಗಿದ್ದಾರೆ.
ಈ ಸಂಬಂಧ ಪತಿ, ಪತ್ನಿ ದೂರು ನೀಡಿದ್ದು, ಕುಮ್ಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಹೊರಬೈಲು ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಅದರಲ್ಲಿ 60 ಮನೆಗಳು ಜೋಗಿ ಸಮುದಾಯಕ್ಕೆ ಸೇರಿವೆ. ಜೋಗಿ ಸಮುದಾಯದ ದಿನೇಶ್ ಮತ್ತು ಪ್ರೀತಿ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಸೆಪ್ಟೆಂಬರ್ 10 ರಂದು ಮದುವೆಯಾಗಿದ್ದರು. ಸೆಪ್ಟೆಂಬರ್ 27 ರಂದು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು.
ಆದಿ ಕರ್ನಾಟಕ ಸಮುದಾಯದ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ ಈಗ ಅವರ ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ಸಭೆ ನಡೆಸುವ ಮೂಲಕ, ಕುಟುಂಬವನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದರು ಮತ್ತು ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ವ್ಯಕ್ತಿಯ ಕುಟುಂಬದೊಂದಿಗೆ ಮಾತನಾಡಿದವರಿಗೆ 1,000 ರೂಪಾಯಿ ದಂಡ ವಿಧಿಸಲು ಮತ್ತು ಬಹಿಷ್ಕರಿಸಿದ ಕುಟುಂಬದೊಂದಿಗೆ ಮಾತನಾಡುವವರ ಬಗ್ಗೆ ಮಾಹಿತಿ ನೀಡಿದವರಿಗೆ 500 ರೂಪಾಯಿ ಬಹುಮಾನ ನೀಡಲು ನಿರ್ಧರಿಸಿದ್ದಾರೆ.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹಾಲೇಶಪ್ಪ ಮಾತನಾಡಿ, ‘ಜೋಗಿ ಸಮುದಾಯದ ಕೆಲವರು ನಕಲಿ ಎಸ್‌ಸಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತು, ಸೌಲಭ್ಯ ಪಡೆಯುತ್ತಿದ್ದಾರೆ. ಅವರು ಜೋಗಿ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ಪಡೆಯಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಆದರೆ ಎಸ್‌ಸಿ ಸಮುದಾಯದ ಹುಡುಗಿಯನ್ನು ಸ್ವೀಕರಿಸಲು ಸಿದ್ಧರಿಲ್ಲ. ಇದು ಖಂಡನೀಯ ಎಂದಿದ್ದಾರೆ.
ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ಡಿಎಸ್‌ಎಸ್ ಮುಖಂಡರು ಒತ್ತಾಯಿಸಿದ್ದಾರೆ. ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕೂಡಲೇ ಪ್ರಕರಣ ದಾಖಲಿಸುವಂತೆ ಈಗಾಗಲೇ ಕುಮ್ಸಿ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.tnie ವರದಿ ಮುಕಾಂತರ.