ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣವೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಈ ಹಿಂದೆ ಪ್ರಜ್ವಲ್ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಗೌಡ ಅಜ್ಞಾತ ಸ್ಥಳದಲ್ಲಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ನಾನು ಹದಿನೈದು ವರ್ಷದಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬದ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು, ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದರು. ಅಲ್ಲದೆ, ತುಂಬಾ ಹಿಂಸೆ ನೀಡಿದರು. ಹೀಗಾಗಿ ಅವರ ಮನೆಯಿಂದ ಹೊರಬಂದೆ ಎಂದು ಕಾರ್ತಿಕ್ ಗೌಡ್ ಹೇಳಿದ್ದಾರೆ.
ಬಿಜೆಪಿ ಮುಖಂಡ ದೇವರಾಜೇಗೌಡ ಅವರು ರೇವಣ್ಣ ಅವರ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೀಗಾಗಿ ನನಗೆ ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡರ ಬಳಿ ಹೋದೆ. ಇದೇ ಸಂದರ್ಭದಲ್ಲಿ ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ಧ ಪ್ರಜ್ವಲ್ ರೇವಣ್ಣ ಸ್ಟೇ ತಂದರು. ನಿನ್ನ ಬಳಿಯಿರುವ ವಿಡಿಯೋ, ಫೋಟೋಗಳನ್ನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದರು. ನಾನು ಅವರನ್ನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿರುವುದು ಗೊತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ದೇವರಾಜೇಗೌಡರನ್ನು ಬಿಟ್ಟರೆ ನಾನು ಯಾರಿಗೂ ಕೊಟ್ಟಿಲ್ಲ. ಪೆನ್‌ಡ್ರೈವ್ ಅನ್ನು ಯಾರು ಹಂಚಿದರು ಎಂಬುದು ನನಗೆ ತಿಳಿದಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದೆ? ಈ ಬಗ್ಗೆ ಮಾಧ್ಯಮಗಳ ಮುಂದೆ ವಿವರವಾಗಿ ಹೇಳುತ್ತೇನೆ ಎಂದು ಕಾರ್ತಿಕ್ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಏಪ್ರಿಲ್ 26ರಂದು ಮತದಾನವೂ ನಡೆದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಹೊರಬಂದಿವೆ. ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಮಹಿಳೆರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿರುವ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದೆ. ಇದರ ನಡುವೆ ಪ್ರಜ್ವಲ್ ಅವರು ಜರ್ಮನಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.