ಕೊಡಗು: ತೀವ್ರ ಆಘಾತ ಮೂಡಿಸಿರುವ ಕೊಡಗಿನ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾ (15) ಹತ್ಯೆ ಪ್ರಕರಣದ ಆರೋಪಿ ಪ್ರಕಾಶ್, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ಸೂರ್ಲಬ್ಬಿ ಗ್ರಾಮದಲ್ಲಿಯೇ ಶನಿವಾರ ಬಂಧಿಸಿದ್ದಾರೆ.
ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಶುಕ್ರವಾರ ವ್ಯಾಪಕ ಶೋಧ ಕಾರ್ಯ ನಡೆಸಿದ್ದರೂ ಪ್ರಕಾಶ್ ಸಿಕ್ಕಿರಲಿಲ್ಲ.ಮೀನಾಳನ್ನು ಹತ್ಯೆ ಮಾಡಿರುವ ಆರೋಪಿ ಪ್ರಕಾಶನನ್ನು ಇಂದು ಪೊಲೀಸರು ಬಂಧಿಸಿ, ತೀವ್ರ ತನಿಖೆ ಪ್ರಾರಂಭಿಸಿದ್ದಾರೆ. ಇದೀಗ ಪೊಲೀಸರು, ಆರೋಪಿಯನ್ನು ಸ್ಥಳ ಮಹಜರುಗೆ ಕರೆದುಕೊಂಡು ಹೋದಾಗ ರುಂಡ ಇದ್ದ ಸ್ಥಳವನ್ನು ತೋರಿಸಿದ್ದಾನೆ. ಮೀನಾಳ ರುಂಡವು ಕೊಲೆ ನಡೆದ ಸ್ಥಳದಿಂದ 300 ಮೀ. ದೂರದ ಪೊದೆಯಲ್ಲಿ ಪತ್ತೆಯಾಗಿದೆ..
ಮದುವೆ ಸ್ಥಗಿತಕ್ಕೆ ಕೊಲೆ
ಇನ್ನೂ 15 ವರ್ಷದವಳಾಗಿದ್ದ ಬಾಲಕಿ ಮೀನಾಗೆ ಹಮ್ಮಿಯಾಲ ಗ್ರಾಮದ ಆರೋಪಿ ಮೊಣ್ಣಂಡ ಪ್ರಕಾಶ್ (32) ಜತೆ ಮದುವೆ ನಿಶ್ಚಯ ಮಾಡಲಾಗಿತ್ತು. ಗುರುವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ದಿನವೇ ಎರಡೂ ಕುಟುಂಬಗಳು ಮದುವೆಗೆ ನಿಶ್ಚಿತಾರ್ಥ ನಡೆಸಿದ್ದವು ಎನ್ನಲಾಗಿದೆ. ಅಂದು ಮಧ್ಯಾಹ್ನದ ಹೊತ್ತಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಅಕಾರಿಗಳು ಬಾಲಕಿಗೆ ಮದುವೆ ನಿಶ್ಚಯ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಎರಡೂ ಕುಟುಂಬಗಳ ಮನವೊಲಿಸಿ ಮುಚ್ಚಳಿಕೆ ಬರೆಸಿಕೊಂಡು ತೆರಳಿದ್ದರು.ಆದರೆ ಅದೇ ದಿನ ಸಂಜೆ ಬಾಲಕಿ ಮನೆಗೆ ಬಂದ ಆರೋಪಿ ಪ್ರಕಾಶ್, ಮೀನಾಳ ತಂದೆ ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ಎಳೆದೊಯ್ದು ಮನೆಯಿಂದ ಸುಮಾರು 150 ಮೀ. ದೂರದಲ್ಲಿ ಕತ್ತಿಯಿಂದ ರುಂಡ-ಮುಂಡವನ್ನು ಬೇರ್ಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಇತ್ತ ರುಂಡವಿಲ್ಲದ ಬಾಲಕಿ ಮೃತದೇಹವನ್ನು ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಹಲ್ಲೆಗೊಳಗಾದ ಬಾಲಕಿ ತಾಯಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಆತ್ಮಹತ್ಯೆ ವದಂತಿ
ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೃತದೇಹ ಹಮ್ಮಿಯಾಲದ ಮನೆಯ ಬಳಿ ಪತ್ತೆಯಾಗಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಆದರೆ, ಇದು ಸುಳ್ಳು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.
ಶಾಲೆಗೆ ಶೇ 100 ಫಲಿತಾಂಶ ತಂದುಕೊಟ್ಟಿದ್ದ ವಿದ್ಯಾರ್ಥಿನಿ
ಗುರುವಾರ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ದಿನ ವಿದ್ಯಾರ್ಥಿನಿ ಮೀನಾಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು. ಸೂರ್ಲಬ್ಬಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಏಕೈಕ ವಿದ್ಯಾರ್ಥಿಯಾಗಿದ್ದ ಈಕೆ, ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ಶಾಲೆಗೆ ಶೇ. 100 ಫಲಿತಾಂಶ ತಂದುಕೊಟ್ಟಿದ್ದಳು. ತನ್ನ ಮನೆಯಿಂದ 5 ಕಿ.ಮೀ. ದೂರದಲ್ಲಿರುವ ಶಾಲೆಗೆ ನಿತ್ಯ ನಡೆದು ಬಂದು ತೇರ್ಗಡೆಯಾಗಿದ್ದ ಮೀನಾ ಸಾಧನೆಗೆ ಜಿಲ್ಲೆಯೇ ಹೆಮ್ಮೆ ವ್ಯಕ್ತಪಡಿಸಿತ್ತು. ಆದರೆ, ಅದೇ ದಿನ ಸಂಜೆ ಮೀನಾ ಬರ್ಬರವಾಗಿ ಹತ್ಯೆಯಾಗಿದ್ದಳು.