ಜೂನ್ 14:
ಪ್ರಕರಣ ಸಂಬಂಧ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪದಡಿ ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್ ಬಂಧಿಸಿ ಬುಧವಾರ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಈ ವಿಚಾರ ಬಾಯಿ ಬಿಟ್ಟಿದ್ದಾರೆ.
ಈ ಆರೋಪಿಗಳು ತೆರೆದಿದ್ದ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ನಿಗಮದ ಹಣವನ್ನು ಹೈದರಾಬಾದ್ ಮತ್ತು ಬೆಂಗಳೂರಿನ ವೈನ್ ಶಾಪ್‌ಗಳು, ಬಾರ್‌ಗಳು, ಚಿನ್ನಾಭರಣ ಮಾರಾಟ ಮಳಿಗೆಗಳು ಹಾಗೂ ಸಣ್ಣ ಕಂಪನಿಗಳು ಸೇರಿದಂತೆ ನೂರಕ್ಕೂ ಅಧಿಕ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ನಗದು ರೂಪದಲ್ಲಿ ಪಡೆದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸತ್ಯನಾರಾಯಣ ವರ್ಮಾ ಸಂಬಂಧಿಕರ ಮನೆಯಲ್ಲಿ 8.21 ಕೋಟಿ ರೂ. ಪತ್ತೆಯಾಗಿದೆ. ಹಣವನ್ನು 4 ಸೂಟ್ ಕೇಸ್‌ಗಳಲ್ಲಿ ತುಂಬಿಸಿ, ಸಂಬಂಧಿಕರ ಮನೆಯಲ್ಲಿ ಇರಿಸಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಆರೋಪಿಯ ಸಂಬಂಧಿಕರ ಮನೆಗಳಿಗೆ ತೆರಳಿ ಹಣವನ್ನು ಜಪ್ತಿ ಮಾಡಿದ್ದಾರೆ. ಅಂತೆಯೆ ವಂಚಕ ಸತ್ಯನಾರಾಯಣ ವರ್ಮಾ ಓಡಾಡುತ್ತಿದ್ದ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನೂ ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಎಸ್‌ಐಟಿ ಅಧಿಕಾರಿಗಳು 94.73 ಕೋಟಿ ಹಣದಲ್ಲಿ ಸುಮಾರು 11.83 ಕೋಟಿ ರೂ, ನಗದು ಜಪ್ತಿ ಮಾಡಿದ್ದಾರೆ. ತನಿಖೆ ಮುಂದುವರೆದಿದೆ.