Tue. Dec 24th, 2024

ಮೂಡಾ ಪ್ರಕರಣ:ಎರಡು ಸಲ ಮುಖ್ಯಮಂತ್ರಿ ಆಗಿರುವುದೇ ಹಲವರಿಗೆ ಹೊಟ್ಟೆಯುರಿ-ಸಿದ್ದರಾಮಯ್ಯ

ಮೂಡಾ ಪ್ರಕರಣ:ಎರಡು ಸಲ ಮುಖ್ಯಮಂತ್ರಿ ಆಗಿರುವುದೇ ಹಲವರಿಗೆ ಹೊಟ್ಟೆಯುರಿ-ಸಿದ್ದರಾಮಯ್ಯ

ಜು ೧೧:

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ. ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಇಂಥಾ ಬಹಳಷ್ಟು ಪಿತೂರಿ, ಷಡ್ಯಂತ್ರ ನೋಡಿ, ಎದುರಿಸಿ ಬಂದಿದ್ದೀನಿ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ.

ಬಿಜೆಪಿಯವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಮಾತ್ರ ರಾಜಕೀಯ ಮಾಡಲು ಗೊತ್ತಿರುವುದಲ್ಲ, ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ. ಬಿಜೆಪಿಯವರು ಬೇಕಾದರೆ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ ಯಾರ ತಕರಾರೂ ಇಲ್ಲ. ಮೂಡಾ ನಿವೇಶನ ಹಂಚಿಕೆ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದು ನಿಶ್ಚಿತ.

ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ ಎನ್ನುವುದು ನಮ್ಮ ವಾದ. ಅವರು ಕಾನೂನುಬಾಹಿರವಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ದಾಖಲೆ ತೋರಿಸಲಿ. ಜಿಲ್ಲಾಧಿಕಾರಿಗಳು 2005 ರಲ್ಲಿ ಭೂ ಪರಿವರ್ತನೆ ಮಾಡಿದ್ದು, ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ನನ್ನ ಭಾವಮೈದುನ. 2010 ರಲ್ಲಿ ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ? ಕೃಷಿ ಭೂಮಿ ಎಂದು ಕೊಟ್ಟಿದ್ದರೂ ಕೂಡ ತಪ್ಪೇನು?

2014 ರಲ್ಲಿ ಮೂಡಾ ಜಮೀನು ಅಲ್ಲದೆ ಹೋದರೂ ಕೂಡ ನಮ್ಮ ಜಮೀನಲ್ಲಿ ನಿವೇಶನ ಮಾಡಿ ಹಂಚಿದ್ದಾರೆ. ಅದಕ್ಕೆ ನಾವು ಸುಮ್ಮನೆ ಬಿಡಬೇಕಾ? ಬದಲಿ ನಿವೇಶನ ಕೇಳಿದ್ದವೇ ಹೊರತು ಇಂಥಾ ಜಾಗದಲ್ಲಿಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಆಗ ಮೂಡಾ ಸದಸ್ಯರೆಲ್ಲಾ ಏನು ಮಾಡುತ್ತಿದ್ದರು? ಬಿಜೆಪಿ ಸರ್ಕಾರವೇ ಇತ್ತು ಆಗ. ಕಾನೂನು ಪ್ರಕಾರ ನಮಗೆ ಬೇರೆ ಜಮೀನು ಕೊಡಬೇಕು.

ಇದೇ ರೀತಿಯಲ್ಲಿ ಸುಂದರಮ್ಮ ಪ್ರಕರಣದಲ್ಲಿ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಉಚ್ಚ ನ್ಯಾಯಾಲಯ ಅಷ್ಟು ಜಾಗವನ್ನೂ ಕೊಡಲು ಆದೇಶಿಸಿ ಒಂದು ಲಕ್ಷ ರೂಪಾಯಿ ದಂಡವನ್ನೂ ಮೂಡಾಗೆ ಹಾಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಡಾ ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು? ಸಿದ್ದರಾಮಯ್ಯ ಜವಾಬ್ದಾರರೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕಲ್ಲವೇ.ಅದರ ಪ್ರಕಾರ 57 ಕೋಟಿಯಾದರೆ ಬಡ್ಡಿ ಸೇರಿಸಿ 62 ಕೋಟಿಯಾಗುತ್ತದೆ. ಮೂಡಾದವರು 62 ಕೋಟಿ ಕೊಡಬೇಕಾಗುತ್ತದೆ.

2021ರಲ್ಲಿ ನಾನು ವಿರೋಧ ಪಕ್ಷದ ನಾಯಕ ಇದ್ದೆ. ಆಗ ನಾನು ಹೇಳಿದ್ದನ್ನು ಕೇಳಿ ಸರ್ಕಾರ ಕೆಲಸ ಮಾಡುತ್ತಿತ್ತಾ?ಮೂಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಿದೆ. ನಮಗೆ ನಿವೇಶನ ಕೊಟ್ಟಿದ್ದು ಹಗರಣವಲ್ಲ. ನಮ್ಮ ಜಮೀನನ್ನು ಮುಡಾದವರು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ. ಬೇರೆಯವರ ಹಾಗೆ ನಾವೇ ಮುಡಾಗೆ ಜಮೀನು ಬಿಟ್ಟುಕೊಟ್ಟು ಪರಿಹಾರ ಕೇಳುತ್ತಿರೋದಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.

2020ನೇ ಇಸವಿಯಲ್ಲಿ ಮೂಡಾ ಅಲ್ಲದೇ ಬೇರೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ 50:50 ಅನುಪಾತ ಜಾರಿಗೆ ಬಂದಿದೆ. ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ. ಭೂಮಾಲೀಕರಿಗೆ ನಷ್ಟವುಂಟಾಗಬಾರದು ಎಂದು ತನಿಖೆ ನಡೆಸಲಾಗುತ್ತಿದೆ. ಮೂಡಾ ಆಯುಕ್ತರು, ಮತ್ತಿತರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ದುರುಪಯೋಗ ತಡೆಯಲು ತನಿಖೆ ನಡೆಸಿ ಸರಿಮಾಡುತ್ತೇವೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks