ಜು ೨೫:
ಬಜೆಟ್ ಮೇಲಿನ ಟೀಕೆಯಲ್ಲಿ ಖರ್ಗೆ, “ನಿಮ್ಮ ಬಜೆಟ್‌ನಲ್ಲಿ ಆಂಧ್ರಪ್ರದೇಶ ಮತ್ತು ಬಿಹಾರವನ್ನು ಬಿಟ್ಟರೆ ಮತ್ತಾವ ರಾಜ್ಯಗಳಿಗೂ ಪ್ರಮುಖ ಒತ್ತು ನೀಡಿಲ್ಲ. ಇಂತಹ ಬಜೆಟ್ ಅನ್ನು ನಾನು ಇದುವರೆಗೆ ನೋಡಿಲ್ಲ. ಇದು ನಿಮ್ಮ ಮಿತ್ರಪಕ್ಷಗಳನ್ನು ಖುಷಿಪಡಿಸಲು ಹಾಗೂ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಡಿದ್ದು, ಇದನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದಾಗ ಸಭಾಪತಿ ಧನಕರ್ ಅವರು, “ಖರ್ಗೆ ಜೀ, ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡಲು ಸಚಿವರಿಗೆ ಅವಕಾಶ ನೀಡಿ” ಎಂದರು.
ಖರ್ಗೆ ತಮ್ಮ ಮಾತು ಮುಂದುವರೆಸುತ್ತ, “ಹೌದು, ಮಾತಾಜಿಗೆ ಮಾತನಾಡಲು ಅವಕಾಶ ನೀಡುತ್ತೇನೆ. ಮಾತಾಜಿ ಮಾತನಾಡುವುದರಲ್ಲಿ ನಿಪುಣರು” ಎಂದು ಹೇಳಿದ್ದಾರೆ. ಇದರ ಪ್ರತಿಕ್ರಿಯೆಯಲ್ಲಿ ಧನಕರ್ ಹೇಳಿದರು, “ಖರ್ಗೆ ಜೀ, ನಿರ್ಮಲಾ ನಿಮಗೆ ಮಾತಾಜಿ ಅಲ್ಲ, ಮಗಳು.”
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಉತ್ತರದಲ್ಲಿ, “ಈ ಬಜೆಟ್‌ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ಪ್ರತಿ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳ ಹೆಸರನ್ನು ಸೂಚಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಈ ಬಜೆಟ್‌ನಲ್ಲಿ ಮಹಾರಾಷ್ಟ್ರದ ಹೆಸರನ್ನು ಉಲ್ಲೇಖಿಸಿಲ್ಲ ಆದರೆ ಅಲ್ಲಿ ಹೊಸ ಬಂದರು ಯೋಜನೆ ನೀಡಲಾಗಿದೆ” ಎಂದು ವಿವರಿಸಿದರು. “ಬಜೆಟ್ ಭಾಷಣದಲ್ಲಿ ರಾಜ್ಯಗಳನ್ನು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ರಾಜ್ಯಗಳಿಗೆ ಏನೂ ನೀಡಿಲ್ಲ ಎಂದಲ್ಲ. ಕಾಂಗ್ರೆಸ್ ಜನರಲ್ಲಿ ನಮ್ಮ ರಾಜ್ಯಗಳಿಗೆ ಕೇಂದ್ರ ಏನು ನೀಡಿಲ್ಲ ಎಂಬ ಭಾವನೆಯನ್ನು ಮೂಡಿಸುತ್ತಿದೆ” ಎಂದು ಆರೋಪಿಸಿದರು.
ಬಜೆಟ್ ಕುರಿತಂತೆ ನಡೆದ ಚರ್ಚೆಯಲ್ಲಿ, ಇತರ ನಾಯಕರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇತ್ತೀಚಿನ ಬಜೆಟ್ ಕೆಲವು ರಾಜ್ಯಗಳಿಗೆ ತೂಕ ನೀಡಿಲ್ಲವೆಂಬ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿವೆ,ಕೇಂದ್ರ ಸರ್ಕಾರ ತನ್ನ ಬಜೆಟ್ ನಿರ್ಧಾರಗಳನ್ನು ಸಮರ್ಥಿಸುತ್ತಿದ್ದು, ಎಲ್ಲ ರಾಜ್ಯಗಳ ಅಭಿವೃದ್ಧಿಗೆ ತಕ್ಕ ಮೌಲ್ಯ ನೀಡಲಾಗಿದೆ ಎಂಬುದನ್ನು ಪುನರುಚ್ಚರಿಸುತ್ತಿದೆ.
ಈ ಬಜೆಟ್ ಚರ್ಚೆಯ ವೇಳೆ ವ್ಯಕ್ತವಾದ ಹೇಳಿಕೆಗಳು ಹಾಗೂ ಪ್ರತಿಕ್ರಿಯೆಗಳು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲದ ಕೇಂದ್ರಬಿಂದುಗಳಾಗಿ ಉಳಿದಿವೆ.
[…] […]