ಯಾದಗಿರಿ ಆ ೦೫:
ಶ್ವೇತಾ ನೀಡಿದ ದೂರಿನ ಪ್ರಕಾರ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಮತ್ತು ಅವರ ಪುತ್ರ ಪಂಪನಗೌಡ (ಸನ್ನಿಗೌಡ) ವಿರುದ್ಧ ಲಂಚ ಮತ್ತು ಹಠಾತ್ ಒತ್ತಡದಿಂದ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದೂರನ್ನು ಆಧರಿಸಿ, ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 105/2024, ಕಲಂ 352, 108 ಸಂಗಡ 3(5) ಬಿಎನ್‌ಎಸ್ 2023 ಮತ್ತು ಕಲಂ 3(1)(ಆರ್)(ಎಸ್) 3(2)(v), ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಗಂಭೀರತೆಯನ್ನು ಮನಗಂಡು, ಡಿ.ಜಿ ಮತ್ತು ಐ.ಜಿ.ಪಿ ಅವರು ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ನೀಡಲು ಆದೇಶಿಸಿದ್ದಾರೆ. ಹೀಗಾಗಿ ಪ್ರಕರಣದ ಕಡತವನ್ನು ಬೆಂಗಳೂರಿನ ಸಿಐಡಿ ಘಟಕಕ್ಕೆ ಆ. 5ರಂದು ವರ್ಗಾಯಿಸಲಾಗುವುದು ಎಂದು ಎಸ್‌ಪಿ ಜಿ. ಸಂಗೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಸ್‌ಐ ಪರಶುರಾಮ್ (34) ಇತ್ತೀಚೆಗೆ ಸೈಬರ್ ಕ್ರೈಮ್ ವಿಭಾಗಕ್ಕೆ ವರ್ಗಾವಣೆಗೊಂಡು, ಕೆಲವೇ ದಿನಗಳ ಹಿಂದೆ ಯಾದಗಿರಿ ನಗರ ಪೊಲೀಸ್ ಠಾಣೆಯಿಂದ ಬೀಳ್ಕೊಡಗುವ ಸಂದರ್ಭದಲ್ಲಿ ಭಾನುವಾರ (ಆ.2) ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಶಾಸಕರ ಒತ್ತಡದಿಂದ ಈ ದುರ್ಘಟನೆ ನಡೆದಿದೆ ಎಂದು ಶ್ವೇತಾ ದೂರಿನಲ್ಲಿ ತಿಳಿಸಿದ್ದು, ಈ ಕುರಿತು ಸ್ಥಳೀಯ ದಲಿತ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಿ, ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದವು.
ಪರಶುರಾಮ್ ಅವರ ಸಾವಿನ ಹಿಂದಿರುವ ಸಂಶಯಾಸ್ಪದ ಘಟನೆಗಳಿಗೆ ಸಂಬಂಧಿಸಿದಂತೆ, ಸಿಐಡಿ ತಂಡ ಯಾದಗಿರಿ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ್ದು, ಸ್ಥಳೀಯ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡುತ್ತಿದೆ.
ಈ ಪ್ರಕರಣವು ರಾಜ್ಯದ ರಾಜಕೀಯ ವಲಯದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಿಎಸ್‌ಐ ಪರಶುರಾಮ್ ಅವರ ಪತ್ನಿಯ ದೂರಿನ ಆಧಾರದ ಮೇಲೆ ಶಾಸಕರ ಮತ್ತು ಅವರ ಪುತ್ರನ ವಿರುದ್ಧದ ಕ್ರಮವನ್ನು ಗಮನದಲ್ಲಿಟ್ಟುಕೊಂಡು, ತಕ್ಷಣದ ತನಿಖೆ ಆರಂಭಿಸುವಂತೆ ಸಿಐಡಿಗೆ ಸೂಚನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ, ಮಾನಪ್ಪ ಹಡಪದ ಅವರಂತಹ ಸಾಮಾಜಿಕ ಹೋರಾಟಗಾರರು ಕೂಡ ಪ್ರಕರಣದ ತ್ವರಿತ ಮತ್ತು ನಿಷ್ಠಾವಂತ ತನಿಖೆಗೆ ಆಗ್ರಹಿಸಿದ್ದಾರೆ.
ಪ್ರಕರಣದ ಎಲ್ಲಾ ಭಾಗಗಳನ್ನು ಸಿ.ಐ.ಡಿ. ಸಮಗ್ರವಾಗಿ ಪರಿಶೀಲಿಸಿ, ನಿಷ್ಠಾವಂತ ತನಿಖೆ ನಡೆಸುವ ಮೂಲಕ ನ್ಯಾಯ ನೀಡುವಂತೆ ಸಾರ್ವಜನಿಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.
ಇದನ್ನು ಓದಿ : ಪಿಎಸ್ಐ ಪರಶುರಾಮ ಸಾವು ಪ್ರಕರಣ: ಶಾಸಕ ಚನ್ನಾರೆಡ್ಡಿ ಪಾಟೀಲ್, ಪಂಪನಗೌಡ್ ವಿರುದ್ಧ ಹೊಸ ಆರೋಪ