Tue. Dec 24th, 2024

ಯಾದಗಿರಿ: ಸಿಡಿಲು ಬಡಿದು ನಾಲ್ವರು ಸಾವು, ಸಚಿವರಿಂದ ಸಾಂತ್ವನ

ಯಾದಗಿರಿ: ಸಿಡಿಲು ಬಡಿದು ನಾಲ್ವರು ಸಾವು, ಸಚಿವರಿಂದ ಸಾಂತ್ವನ

ಯಾದಗಿರಿ, ಸೆ ೨೪:-

ಯಾದಗಿರಿ ಜಿಲ್ಲೆಯ ಜಿನಕೇರಾ ತಾಂಡದಲ್ಲಿ ಸಿಡಿಲು ಬಡಿದು ನಾಲ್ವರು ಮೃತರಾಗಿದ್ದಾರೆ. ಈ ದಾರುಣ ಘಟನೆಯಿಂದ ಇಡೀ ಗ್ರಾಮವು ಶೋಕದಲ್ಲಿ ಮುಳುಗಿದೆ. ನಿನ್ನೆ ನಡೆದ ಈ ಘಟನೆಯಲ್ಲಿ ನೇನು (18), ಚೇನು (22), ಕಿಶನ್ (30) ಮತ್ತು ಸುಮಿಬಾಯಿ (30) ಎಂಬುವವರು ಸಾವನ್ನಪ್ಪಿದ್ದಾರೆ. 3 ಜನರಿಗೆ ಗಾಯಗಳಾಗಿದ್ದು, ಒಬ್ಬರಿಗೆ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ, ಇನ್ನೂ ಇತರರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದುರ್ಘಟನೆಯ ಕುರಿತು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಕ್ಕೆ ಭೇಟಿ ನೀಡಿದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಅವರ ನೋವನ್ನು ಹಂಚಿಕೊಂಡರು.

ಸಚಿವರು ಮಾತನಾಡುತ್ತ, “ಇಂತಹ ದುಃಖದ ಘಟನೆಗಳು ಮತ್ತೆ ನಡೆಯದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ಧನಸಹಾಯ ನೀಡಿದ್ದೇನೆ. ಸರ್ಕಾರದಿಂದಲೂ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದು ಸಂಜೆ ಒಳಗಾಗಿ ಸರ್ಕಾರದಿಂದ ಘೋಷಿಸಲಾದ 5 ಲಕ್ಷ ರೂ. ಪರಿಹಾರ ಧನವನ್ನು ಮೃತರ ಕುಟುಂಬಗಳಿಗೆ ಜಮೆ ಮಾಡಲಾಗುವುದು” ಎಂದು ತಿಳಿಸಿದರು.

ಸಚಿವರೊಂದಿಗೆ ಜಿಲ್ಲಾ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ತಹಶೀಲ್ದಾರ ಸುರೇಶ ಅಂಕಲಗಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಹಾಗೂ ಇತರ ಪ್ರಮುಖ ಅಧಿಕಾರಿಗಳು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಸಚಿವರಿಂದ ಗಾಯಾಳುಗಳ ಆರೋಗ್ಯ ವಿಚಾರ:
ಸಿಡಿಲಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಸಚಿವರು ಆಸ್ಪತ್ರೆಗೆ ತೆರಳಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ವೈದ್ಯರಿಗೆ ತುರ್ತು ಮತ್ತು ಸಮರ್ಪಕ ಚಿಕಿತ್ಸೆ ನೀಡುವಂತೆ ಸೂಚಿಸಿದರು. “ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ, ಸರ್ಕಾರಿ ನೆರವಿನ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಈ ಘಟನೆ ಇಡೀ ಜಿನಕೇರಾ ತಾಂಡಕ್ಕೆ ಆಘಾತ ತಂದಿದ್ದು, ಗ್ರಾಮಸ್ಥರು ಸರ್ಕಾರದ ಕ್ರಮಗಳನ್ನು ನಿರೀಕ್ಷಿಸುತ್ತಿದ್ದಾರೆ. ಸ್ಥಳೀಯ ಶಾಸಕ, ಅಧಿಕಾರಿಗಳು, ಮತ್ತು ಜಿಲ್ಲಾ ಆಡಳಿತ ಕೂಡ ಇಂತಹ ಘಟನೆಗಳು ಮತ್ತೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks