ಯಾದಗಿರಿ:ಯಾದಗಿರಿಯಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಕೊಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೊಟ್ಟಿ ಕೇಳಲು ಹೋಗಿದ್ದ ಯುವಕನನ್ನು ಜಾತಿ ನಿಂದನೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಾಯಿ ದೂರು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದಿರುವ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ನಗರದ ಶಹಾಪುರ ಪೇಟ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ರಾಕೇಶ್ (22) ಕೊಲೆಯಾದವ. ಫಯಾಜ್ ಹಾಗೂ ಸಂಗಡಿಗರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮರೆಮಾಚಲು ಯತ್ನ?
ಹಿಂದೂ ಯುವಕನ ಹತ್ಯೆ ಮರೆಮಾಚಲು ಪೊಲೀಸ್ ಇಲಾಖೆ ಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಭಾನುವಾರ ತಡರಾತ್ರಿ ಕೊಲೆಯಾದ್ರೂ ಪೊಲೀಸರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಹಿಂದೂ ಯುವಕನ ಕುಟುಂಬಕ್ಕೆ ಬಿಜೆಪಿ, ಹಿಂದೂ ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದು, ಬಿಜೆಪಿ ಪ್ರತಿಭಟನೆ ವೇಳೆ ಈ ಘಟನೆ ಪ್ರಸ್ತಾಪ ಮಾಡಿ ಕೇಸ್ ದಾಖಲು ಮಾಡದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ನಡೆದ 18 ಗಂಟೆಗಳ ಬಳಿಕ ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ.ಸಂಗೀತಾ ಭೇಟಿ ನೀಡಿ ಸ್ಥಳದಲ್ಲೇ ನಿಂತು ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆ ವಿವರ
ಯುವಕ ರೊಟ್ಟಿ ತರಲು ಹತ್ತಿರದಲ್ಲೇ ರೊಟ್ಟಿ ಮಾರಾಟ ಮಾಡುತ್ತಿದ್ದ ಫಯಾಜ್ ಅವರ ಮನೆಗೆ ರಾತ್ರಿ ಹೋಗಿ ಬಾಗಿಲು ಬಡಿದಿದ್ದಾನೆ. ರಾತ್ರಿಯಾಗಿದ್ದರಿಂದ ರೋಟಿ ಕೊಡದೆ ಕಳಿಸಿದ್ದಾರೆ. ನಂತರ ಫಯಾಜ್ ಹಾಗೂ ಸಂಗಡಿಗರು ಯುವಕ ಮನೆಗೆ ಹೋಗಿ ಅವನನ್ನು ಹೊರಗೆ ಕರೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಯುವಕನ ಗುಪ್ತಾಂಗಕ್ಕೆ ಏಟು ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.