ಜೂ.01: ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ಹೇಳಿದ್ದರು.
ಈ ಕುರಿತು ತನಿಖೆ ನಡೆಸಿದ ಕೇರಳ ಸರ್ಕಾರ ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರುಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿದೆ.
ಈ ಸಂಬಂಧ ಕೇರಳ ಸರ್ಕಾರ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಮೂಲಕ ಕಣ್ಣೂರು, ತಳಿಪರಂಬ ಭಾಗದಲ್ಲಿ ವಿಶೇಷ ತನಿಖೆ ನಡೆಸಿದೆ. ಸಮಗ್ರ ತನಿಖೆ ನಡೆಸಿದ ತನಿಖಾ ದಳ ಕೇರಳದ ಡಿಜಿಪಿ ಅವರಿಗೆ ವರದಿ ಸಲ್ಲಿದೆ. ವರದಿಯಲ್ಲಿ ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ.
ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟನೆ
ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ ಎಂದು ಕೇರಳದ ತಾಳಿಪರಂ ಶ್ರೀ ರಾಜರಾಜೇಶ್ವರಂ ದೇವಸ್ಥಾನ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರಂ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ. ಶ್ರೀ ರಾಜರಾಜೇಶ್ವರ ದೇವಸ್ಥಾನವು ಕೇರಳದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಹಿತಾಸಕ್ತಿಗಳ ವಿರುದ್ಧದ ಪ್ರಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಕಣ್ಣೂರು ತಳಿಪರಂಬ ಶ್ರೀರಾಜರಾಜೇಶ್ವರಂ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪೂಜೆ ಅಥವಾ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಕೆಶಿ ಹೇಳಿದ್ದೇನು?
ಮುಖ್ಯಮಂತ್ರಿಗಳು ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ. ಇದು ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ. ಯಾಗದಲ್ಲಿ 21 ಮೇಕೆ, 5 ಹಂದಿ, 21 ಕುರಿಗಳನ್ನು ಬಲಿ ಕೊಟ್ಟಿದ್ದಾರೆ. ಬೇಕಿದ್ದರೆ ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸು ಪಾಸು ತಪಾಸಣೆ ಮಾಡಿ, ನಿಮಗೆ ಗೊತ್ತಾಗುತ್ತೆ ಎಂದಿದ್ದರು.