ಯಾದಗಿರಿ ಜು 21 : ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ 3130 ಫಲಾನುಭವಿ ಪದವಿಧರರಿಗೆ 3000 ರೂ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ 1500 ರೂ. ಒಟ್ಟು 93,75,000 ರೂ. ಹಣವನ್ನು ನೇರವಾಗಿ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್) ಮೂಲಕ ಅವರ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಹೆಚ್ಚಿನ ನೋಂದಣಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲ. ಬಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಪದವಿ ಹಾಗೂ ಡಿಪ್ಲೋಮಾ 2022-23 ರಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿ 6 ತಿಂಗಳ ಮೇಲ್ಪಟ್ಟ (180 ದಿನಗಳು) ನಿರುದ್ಯೋಗ ಯುವಕ, ಯುವತಿಯರು ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದು.
ಯುವನಿಧಿ ಯೋಜನೆ: ಅರ್ಹತೆಗಳು
ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ 71 ಪದವಿ ಕಾಲೇಜು, 7 ಡಿಪ್ಲೋಮಾ ಕಾಲೇಜು ಹಾಗೂ 1 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅದರಂತೆ ಯುವನಿಧಿ ಯೋಜನೆಯಡಿಯಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಸಲ್ಲಿಸಿದ 4604 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅರ್ಜಿಯು ಸಲ್ಲಿಸಲು ಅರ್ಹತೆಗಳು:
- ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 6 ವರ್ಷ ವಾಸವಾಗಿರಬೇಕು.
- ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ವ್ಯಾಸಂಗ ಮಾಡಿ ಪಾಸಾದ ಅಭ್ಯರ್ಥಿಗಳು ಕನಿಷ್ಠ 6 ತಿಂಗಳು ನಿರುದ್ಯೋಗಿಯಾಗಿರಬೇಕು.
- ಈ ಸೌಲಭ್ಯ 2 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗುತ್ತದೆ.
- ಉದ್ಯೋಗ ದೊರೆಕಿದ್ದಲ್ಲಿ ಈ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.
ಅರ್ಜಿಯ ಪ್ರಕ್ರಿಯೆ
ನಿರುದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸುತ್ತಿದ್ದು, ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಸ್ವತಂತ್ರ ಪರಿಶೀಲನೆ
ನಿರುದ್ಯೋಗ ಸ್ಥಿತಿಗತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ಸ್ವಯಂ ಘೋಷಣೆ ಕಡ್ಡಾಯ ಎಂದು ತಿಳಿಸಿದ್ದಾರೆ. ಈ ಯೋಜನೆ ಉನ್ನತ ವ್ಯಾಸಂಗ ಮಾಡುತ್ತಿರುವವರು, ಸ್ವಯಂ ಉದ್ಯೋಗ ಮಾಡುವವರು ಅರ್ಹರಲ್ಲ ಎಂದು ತಿಳಿಸಿದರು.
ಸ್ವಯಂ ಘೋಷಣೆ
ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳಲ್ಲಿತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ ಮಾಡಬೇಕು.
ಪೋರ್ಟಲ್ ಬಳಸುವ ವಿಧಾನ
ಸೇವಾ ಸಿಂಧು ಪೋರ್ಟಲ್ ನಲ್ಲಿ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯೋಜನ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು 25ನೇ ತಾರೀಖು ಒಳಗಾಗಿ ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೋಂದಣಿ ಮತ್ತು ಬ್ಯಾಂಕ್ ಖಾತೆ
ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ವೆಬ್‌ಸೈಟ್ sevasindhu.karnataka.gov.in ನಲ್ಲಿ ಸ್ವಯಂ ಘೋಷಣೆ ಮಾಡಿಕೊಂಡು ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿಕೊಳ್ಳಬೇಕು.
ಅನುಮೋದಿತ ಅರ್ಜಿಗಳು
ಒಂದು ವೇಳೆ ಅರ್ಜಿಯು ಅಪ್ರೂವ್ ಆಗದ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗೆ ಎಲ್ಲ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣಪತ್ರಗಳೊಂದಿಗೆ ಖುದ್ದಾಗಿ ಬೇಟೆ ನೀಡಿ ಅವುಗಳ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಾಯವಾಣಿ ಮತ್ತು ಸಂಪರ್ಕ
ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸಹಾಯವಾಣಿ ಸಂಖ್ಯೆ 1800-599-9918ಗೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಚೇರಿಗೆ ಸಂಖ್ಯೆ 08473-253718ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.