Tue. Dec 24th, 2024

2024-25ನೇ ಬಜೆಟ್: ಬಡವರಿಗೆ ಮನೆ, ಉಚಿತ ವಿದ್ಯುತ್ ಮತ್ತು ಕೃಷಿ ಅಭಿವೃದ್ಧಿಗೆ ಮಹತ್ವದ ಯೋಜನೆಗಳು

2024-25ನೇ ಬಜೆಟ್: ಬಡವರಿಗೆ ಮನೆ, ಉಚಿತ ವಿದ್ಯುತ್ ಮತ್ತು ಕೃಷಿ ಅಭಿವೃದ್ಧಿಗೆ ಮಹತ್ವದ ಯೋಜನೆಗಳು

ಜು ೨೩: ಎನ್‌ಡಿಎ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಮಂಡಿಸಿದರು. ಬಡವರಿಗೆ, ಕೃಷಿಕರಿಗೆ ಮತ್ತು ನಗರ ವಸತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ ಬಜೆಟ್‌ ನಲ್ಲಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (Pradhan Mantri Awas Yojana) ಅಡಿ ಹೆಚ್ಚುವರಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರಗಳ ವಸತಿ ಯೋಜನೆಗೆ 2.2 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ಕೇಂದ್ರ ಘೋಷಿಸಿದ್ದು, 10 ಲಕ್ಷ ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಗರಗಳ 1 ಕೋಟಿ ಬಡ ಮತ್ತು ಮಧ್ಯಮ ವರ್ಗಗಳಿಗೆ ವಸತಿ ಸೌಕರ್ಯಗಳನ್ನು ಒದಗಿಸಲಾಗುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಮೂಲಕ ಯೋಜನೆಯನ್ನು ವಿಸ್ತರಿಸಲಾಗುವುದು. 2015ರ ಜೂನ್‌ನಲ್ಲಿ ಪ್ರಾರಂಭವಾದ ಈ ಯೋಜನೆ, ಎಲ್ಲ ಅರ್ಹ ನಗರ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಸತಿ ಯೋಜನೆಗೆ ಹೆಚ್ಚುವರಿ ಅನುದಾನ:

ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಪಿಎಂಎವೈಗೆ 80,671 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಅದಕ್ಕೂ ಹಿಂದಿನ ಬಜೆಟ್‌ನಲ್ಲಿ 54,103 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಅನುದಾನವನ್ನು ಮತ್ತಷ್ಟು ವಿಸ್ತರಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಸತಿ ಕೊರತೆಯನ್ನು ನೀಗಿಸಲು ಯೋಜನೆ ಹಾಕಲಾಗಿದೆ. ಕಳೆದ 10 ವರ್ಷಗಳಲ್ಲಿ 4.21 ಕೋಟಿ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

ಉಚಿತ ವಿದ್ಯುತ್:

ಬಜೆಟ್‌ನಲ್ಲಿ 1 ಕೋಟಿ ಮನೆಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ. ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ (PM Surya Ghar Muft Bijli Yojana) ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗುವುದು. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, “1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಸೋಲಾರ್‌ ಫಲಕಗಳನ್ನು ಸ್ಥಾಪಿಸಲು ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗೆ ಉತ್ತೇಜನ ನೀಡಲಾಗುವುದುʼʼ ಎಂದರು.

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಬೆಂಬಲ:

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಮುಂದಿನ ವರ್ಷಗಳಲ್ಲಿ ದೇಶಾದ್ಯಂತ 10,000 ಜೈವಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 1 ಕೋಟಿ ರೈತರನ್ನು ಬ್ರ್ಯಾಂಡಿಂಗ್ ಮತ್ತು ಪ್ರಮಾಣೀಕರಣದ ಮೂಲಕ ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಲಾಗುವುದು. ತರಕಾರಿ ಬೆಳೆಗಳನ್ನು ಜೀವನಾಧಾರವಾಗಿ ಮಾಡಿಕೊಂಡಿರುವ ರೈತರಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ, ತರಕಾರಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ಮಿಸುವ ಯೋಜನೆ ಪ್ರಕಟಿಸಲಾಯಿತು.

ಮೋದಿ ಸರ್ಕಾರದ ಈ ಬಜೆಟ್, ಬಡವರ ವಸತಿ ಸಮಸ್ಯೆಯನ್ನು ಪರಿಹರಿಸುವುದರೊಂದಿಗೆ, ಉಚಿತ ವಿದ್ಯುತ್, ನೈಸರ್ಗಿಕ ಕೃಷಿ ಮತ್ತು ತರಕಾರಿ ಉತ್ಪಾದನೆಯ ಮತ್ತಷ್ಟು ಸುಧಾರಣೆಗೊಳಿಸಲು ಮಹತ್ವದ ಹೆಜ್ಜೆ ಆಗಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!
Enable Notifications OK No thanks