ವಿಜಯನಗರ
ತುಂಗಭದ್ರಾ ನದಿ ತೀರದಲ್ಲಿರುವ ಜನತೆ ಮತ್ತು ರೈತರು ಈಗ ಭಾರೀ ಚಿಂತೆಗೊಳಗಾಗಿದ್ದಾರೆ. ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಇದರಿಂದ ಈಗಾಗಲೇ 8 ಟಿಎಂಸಿ ನೀರು ಹರಿದುಹೋಗಿದೆ. ಈ ಸಂದರ್ಭದಲ್ಲಿ ರೈತ ಮುಖಂಡ ವಾಸುದೇವ ಮೇಟಿ, “ಸರ್ಕಾರವು ತಕ್ಷಣವೇ ಎನ್ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ, ತುಂಗಭದ್ರಾ ಜಲಾಶಯದ ಶಾಶ್ವತ ಕ್ರಸ್ಟ್ ಗೆಟ್ ಬದಲಾಗಿ ತಾತ್ಕಾಲಿಕ ‘ಸ್ಟಾಪ್ ಲಾಗ್ ಗೇಟ್’ ಅಳವಡಿಸುವ ಸಾಧ್ಯತೆ ಇದೆ. ಶಾಶ್ವತ ಗೇಟ್ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ, ಹೀಗಾಗಿ ಜಲಾಶಯದ ನೀರನ್ನು ಹೆಚ್ಚಾಗಿ ಬಿಟ್ಟರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಹಲವೆಡೆ ಮಳೆಯಿಂದ ಡ್ಯಾಂಗಳು ತುಂಬಿದ್ದು, ಕೆಲವಡೆ ಅತಿವೃಷ್ಟಿ ಪರಿಸ್ಥಿತಿ ಉಂಟಾಗಿದೆ. ಆದರೆ, ಬಯಲು ಸೀಮೆ ಕೋಲಾರ ಸೇರಿದಂತೆ ಹಲವೆಡೆ ಮಳೆ ಕೊರತೆಯಿಂದ ಸಾವಿರಾರು ಕೆರೆಗಳು ಬತ್ತಿ ಹೋಗಿವೆ. ಕೋಲಾರ ಜಿಲ್ಲೆಯ ಜನರಿಗೆ ಬರಗಾಲ ಕಾಡುವ ಭೀತಿ ಎದುರಾಗಿದೆ. ಪ್ರಸಕ್ತ ವರ್ಷ ಮಳೆ ಕೈಕೊಟ್ಟರೆ, ಮುಂದಿನ ವರ್ಷ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಆತಂಕವಿದೆ. ಈ ಹಿನ್ನೆಲೆಯಲ್ಲಿ, ರೈತರು ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ, ಕೆ.ಸಿ ವ್ಯಾಲಿ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. 19ನೇ ಕ್ರಸ್ಟ್ ಗೆಟ್ ತುಂಡಾದ ಘಟನೆ ಕುರಿತಂತೆ, ಮುಖ್ಯಮಂತ್ರಿ ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅವರು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಘಟನೆಯ ನಂತರ, ಅಣೆಕಟ್ಟಿನ ಸುತ್ತಮುತ್ತಲಿನ ಗ್ರಾಮಗಳು ಆತಂಕದಲ್ಲಿ ಮುಳುಗಿದ್ದು, ಭವಿಷ್ಯದಲ್ಲಿ ನೀರಿನ ಕೊರತೆಯ ಸಮಸ್ಯೆ ಮತ್ತು ಅದು ತುರ್ತು ಪರಿಸ್ಥಿತಿಗೆ ತಲುಪುವ ಭಯದಿಂದ ಜನತೆ ನಡುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ತಕ್ಷಣವೇ ಸರ್ಕಾರದಿಂದ ಪರಿಹಾರ ಪ್ಯಾಕೇಜ್ ಘೋಷಣೆಯಾಗಬೇಕು ಎಂಬುದು ರೈತ ಸಂಘಟನೆಗಳ ಒತ್ತಾಯವಾಗಿದೆ.